ಋಣಿ ರಾಷ್ಟ್ರ
	
ಬಡ್ಡಿ ಮತ್ತು ಲಾಭಾಂಶಗಳ ರೂಪದಲ್ಲಿ ಇತರ ದೇಶಗಳಿಂದ ಪಡೆಯುವ ಮೊತ್ತಕ್ಕಿಂತ ಅಧಿಕ ಮೊತ್ತವನ್ನು ಈ ರೂಪದಲ್ಲಿ ಆ ದೇಶಗಳಿಗೆ ತೆರುವ ದೇಶ (ಡೆಟರ್‍ನೇಶನ್). ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಸಾಮಾನ್ಯವಾಗಿ ಈ ಅವಸ್ಥೆಯಲ್ಲಿರುತ್ತವೆ. ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲಿನ ಎಲ್ಲ ಜನಾಂಗಗಳ ಕ್ಷೇಮಾಭ್ಯುದಯ ಸಾಧನೆಯೇ ಇತ್ತೀಚಿನ ಆರ್ಥಿಕ ಸಮಸ್ಯೆ. ಪ್ರಪಂಚದ ಎಲ್ಲ ರಾಷ್ಟ್ರಗಳೂ ಅವುಗಳ ಅವಶ್ಯಕತೆಗಳಿಗನುಗುಣವಾಗಿ ಪ್ರಕೃತಿದತ್ತವಾದ ಸಂಪತ್ತು ಮತ್ತು ಇತರ ಉತ್ಪನ್ನಗಳ ಸೌಲಭ್ಯ ಹೊಂದಿರುವುದಿಲ್ಲ. ಆಹಾರ, ಬಟ್ಟೆ, ವಸತಿ ಮತ್ತು ಇತರ ಭೋಗಭಾಗ್ಯಗಳಿಗೆ ಬೇಕಾಗುವ ವಸ್ತುಗಳು ಸಾಮಾನ್ಯವಾಗಿ ಪ್ರಪಂಚದ ಎಲ್ಲ ಜನರಿಗೂ ಬೇಕು. ಆದರೆ, ಒಂದೊಂದು ದೇಶಕ್ಕೆ ಒಂದೊಂದು ರೀತಿಯ ನೈಸರ್ಗಿಕ ಉತ್ಪನ್ನ ಸಾಧನಗಳಿವೆ. ವಿಸ್ತಾರವಾಗಿ ಹರಡಿರುವ ಜನರ ಬೇಡಿಕೆಗಳ ಪೂರೈಕೆಯ ಸಲುವಾಗಿ ಈ ಉತ್ಪನ್ನ ಸಾಧನಗಳನ್ನು ರೂಢಿಸುವುದು ಆರ್ಥಿಕಾಭ್ಯುದಯದ ಸುಮಾರ್ಗ. ಈ ಗುರಿಯ ಸಾಧನೆಗಾಗಿ ನಡೆದಿರುವ ಆಧುನಿಕ ಪ್ರಯತ್ನಗಳಲ್ಲಿ ಅಂತರರಾಷ್ಟ್ರೀಯ ಶ್ರಮ ವಿಭಜನೆ ಮತ್ತು ಪರಸ್ಪರ ಅವಲಂಬನೆಗಳು ಅನಿವಾರ್ಯವಾಗಿವೆ. ಪ್ರತಿಯೊಬ್ಬರೂ ದಿನಚರಿಯಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ಅನೇಕ ವಿದೇಶೀ ವಸ್ತುಗಳನ್ನೂ ಪರದೇಶೀಯರಿಗಾಗಿ ತಯಾರಿಸುವ ವಸ್ತುಗಳನ್ನೂ ಎಣಿಸಿದರೆ ಈ ಅಂಶ ವ್ಯಕ್ತವಾಗುತ್ತದೆ. ಪ್ರಪಂಚವೆಲ್ಲವೂ ಏಕೈಕ ಆರ್ಥಿಕಕ್ಷೇತ್ರವೆಂದು ಭಾವಿಸಿ ಜನಾಂಗಗಳ ಅನ್ಯೋನ್ಯ ಹಿತದೃಷ್ಟಿಯಿಂದ ಆರ್ಥಿಕ ಚಟುವಟಿಕೆಗಳನ್ನು ನಡೆಸುವುದೇ ಸಂಪೂರ್ಣ ಆರ್ಥಿಕ ಅಂತರರಾಷ್ಟ್ರೀಯತೆ ಎನ್ನಬಹುದು. ಈ ಸಂಪೂರ್ಣ ಆರ್ಥಿಕ ಅಂತರರಾಷ್ಟ್ರೀಯ ಧ್ಯೇಯದ ಹಿನ್ನೆಲೆಯಲ್ಲೇ ವಿಶ್ವಸಂಸ್ಥೆಯ ಆರ್ಥಿಕ ಅಂಗಸಂಸ್ಥೆಗಳು ರೂಪುಗೊಂಡಿವೆ. ಹೀಗೆ ಈ ಆರ್ಥಿಕ ಭಾಗಗಳು ದೇಶದ ಹಿತದೃಷ್ಟಿಯಿಂದ ಆರ್ಥಿಕ ವಿಕಾಸಕ್ಕಾಗಿ ಸಾಲ ಕೊಡುತ್ತವೆ. ಆರ್ಥಿಕ ಮಟ್ಟಗಳಲ್ಲಿ ಹಿಂದುಳಿದಿರುವ ರಾಷ್ಟ್ರಗಳು ಪಡೆಯುತ್ತಿರುವ ವಿಶ್ವಬ್ಯಾಂಕಿನ ಮತ್ತು ಅಂತರರಾಷ್ಟ್ರೀಯ ವಿನಿಮಯ ನಿಧಿಯ ಸಾಲಗಳೇ ಉದಾಹರಣೆಗಳು. ಈ ಸಂಸ್ಥೆಗಳು ಆರ್ಥಿಕ ವಿಕಾಸಕ್ಕೆ ಕೊಡುತ್ತಿರುವ ನೆರವಿನ ಜೊತೆಗೆ ಬಂಡವಾಳವಾದಿ ರಾಷ್ಟ್ರಗಳು ಹಿಂದುಳಿದ ರಾಷ್ಟ್ರಗಳಿಗೆ ಸಾಲವನ್ನು ಕೊಡುತ್ತಿವೆ. ಒಂದು ರಾಷ್ಟ್ರದ ಉದ್ಯಮಿಗಳು ಇನ್ನೊಂದು ರಾಷ್ಟ್ರದ ಉದ್ಯಮಗಳಲ್ಲಿ ಬಂಡವಾಳ ಹೂಡುವುದೂ ಮುಂದುವರಿದ ರಾಷ್ಟ್ರದ ಉದ್ಯಮಗಳ ಯಂತ್ರತಂತ್ರ ನೆರವನ್ನು ಹಿಂದುಳಿದ ರಾಷ್ಟ್ರ ಪಡೆಯುವುದೂ ಸಾಧ್ಯವಾಗುವಂತೆ ಈ ಎರಡು ರಾಷ್ಟ್ರಗಳ ಉದ್ಯಮಿಗಳೂ ಪರಸ್ಪರ ಸಹಯೋಗದ ಒಪ್ಪಂದ ಮಾಡಿಕೊಳ್ಳುವುದೂ ಸಾಮಾನ್ಯವಾಗಿವೆ. ಮುಂದುವರಿದ ರಾಷ್ಟ್ರದ ಉದ್ಯಮಿಗಳು ಹೀಗೆ ಹೂಡಿದ ಬಂಡವಾಳಕ್ಕೆ ಪ್ರತಿಯಾಗಿ ಬಡ್ಡಿ, ಲಾಭದಲ್ಲಿ ಪಾಲು ಅಥವಾ ಲಾಭಾಂಶವನ್ನು ಪಡೆಯುವುದು ಸಾಮಾನ್ಯ. ಒಂದು ರಾಷ್ಟ್ರದ ಆರ್ಥಿಕಾಭಿವೃದ್ಧಿಯಲ್ಲಿ ಸಾಲಗಳು ಒಂದು ಮುಖ್ಯ ಪಾತ್ರವನ್ನೇ ವಹಿಸಿವೆ.
	
ಒಂದು ರಾಷ್ಟ್ರದ ಸರ್ಕಾರ ಆರ್ಥಿಕಾಭಿವೃದ್ಧಿಗಾಗಿ ಪರರಾಷ್ಟ್ರಗಳಿಂದ ನೇರವಾಗಿ ಸಾಲ ಎತ್ತುವುದೂ ರೂಢಿಗೆ ಬಂದಿದೆ. ಬೇರೊಂದು ರಾಷ್ಟ್ರದ ಸರ್ಕಾರದಿಂದಾಗಲಿ ಅಲ್ಲಿನ ಮೂಲಗಳಿಂದಾಗಲಿ ಅಂತರರಾಷ್ಟ್ರೀಯ ಸಂಸ್ಥೆಗಳಿಂದಾಗಲಿ ಸಾಲ ಪಡೆಯಬಹುದು. ಇದು ಆ ರಾಷ್ಟ್ರದ ಸಾರ್ವಜನಿಕ ಋಣದ ಒಂದು ಭಾಗ. [ಸರ್ಕಾರ ಅಂತರ್ದೇ ಶೀಯವಾಗಿ ಎತ್ತುವ ಸಾಲವೇ ಸಾರ್ವಜನಿಕ ಋಣದ ಇನ್ನೊಂದು ಭಾಗ. ಇದಕ್ಕೆ ಸರ್ಕಾರ ನೇರವಾಗಿ ಬಡ್ಡಿ ತೆರುತ್ತದೆ. ಸರ್ಕಾರದ ಪ್ರವರ್ತನೆಯಿಂದ ಸ್ಥಾಪಿಸಲಾದ ಉದ್ಯಮಗಳಲ್ಲಿ ಈ ಬಂಡವಾಳ ನೇರವಾಗಿ ನಿಯೋಜನೆಯಾಗಿದ್ದರೆ ಕರಾರಿಗನುಗುಣವಾಗಿ ಆ ಸಂಸ್ಥೆಯಿಂದ ಹೊರ ದೇಶಕ್ಕೆ ಲಾಭಾಂಶ ಸಲ್ಲಬಹುದು. ಒಂದು ದೇಶದ ಸರ್ಕಾರವಾಗಲಿ ಖಾಸಗಿ ಉದ್ಯಮ ಸಂಸ್ಥೆಗಳಾಗಲಿ ಆ ದೇಶದೊಳಗಡೆಯೇ ಎಷ್ಟು ಸಾಲ ಎತ್ತಿದರೂ ಅದರ ಮೇಲೆ ಕೊಡುವ ಬಡ್ಡಿಯ ಹಣ ಆ ದೇಶದವರಿಗೇ ಸಲ್ಲುತ್ತದೆ. ಇದು ಆ ದೇಶದ ಗಡಿ ಬಿಟ್ಟು ಸಾಗುವುದಿಲ್ಲ. ಆದರೆ ವಿದೇಶೀ ಸಾಲ ಅಥವಾ ಬಂಡವಾಳ ನಿಯೋಜನೆ ಆ ಬಗೆಯದಲ್ಲ. ಇಲ್ಲಿ ಆಗುವ ಸಂಪತ್ತಿನ ವರ್ಗಾವಣೆ ಆಂತರಿಕವಲ್ಲ; ಅಂತರರಾಷ್ಟ್ರೀಯ. ಇದು ಬಲು ಮುಖ್ಯವಾದ ವ್ಯತ್ಯಾಸ. ಋಣಿ ರಾಷ್ಟ್ರದಿಂದ ಧನಿ ರಾಷ್ಟ್ರಕ್ಕೆ ಸಂದಾಯವಾದ ಕಂತು, ಬಡ್ಡಿ ಮುಂತಾದವು ಆ ದೇಶದ ಜನರ ಮೇಲೆ ನೇರವಾಗಿ ಹೊರಿಸಿದ ಭಾರ. ವಿದೇಶೀಯರು ಪಡೆದ ಹಣದಿಂದ ಅವರು ಋಣಿ ರಾಷ್ಟ್ರದ ಸರಕು ಸೇವೆಗಳ ಮೇಲೆ ಹಿಡಿತ ಹೊಂದಿದಂತಾಗುತ್ತದೆ. ಋಣಿ ರಾಷ್ಟ್ರದ ಸರಕು ಸೇವೆಗಳನ್ನು ಅವರು ಕೊಳ್ಳುವುದರಿಂದ ಅಷ್ಟರಮಟ್ಟಿಗೆ ಅವುಗಳ ಉಪಯೋಗ ಆ ರಾಷ್ಟ್ರದ ಜನರಿಗೆ ತಪ್ಪಿದಂತೆ. ವಿದೇಶೀ ಸಾಲ ಅಥವಾ ಬಂಡವಾಳ ನಿಯೋಜನೆ ಇಲ್ಲದಿದ್ದರೆ ಎಷ್ಟು ಸರಕು ಸೇವೆಗಳ ಉತ್ಪಾದನೆಯಾಗುತ್ತಿತ್ತೋ ಅದಕ್ಕೂ ಹೆಚ್ಚಿನ ಪರಿಮಾಣದಲ್ಲಿ ಇವುಗಳ ಉತ್ಪಾದನೆ ಸಾಧ್ಯವಾದಾಗ ಮಾತ್ರ ಇದು ಋಣಿ ರಾಷ್ಟ್ರಕ್ಕೆ ಲಾಭಕರ. ಇಲ್ಲದಿದ್ದರೆ ಇದು ರಾಷ್ಟ್ರದ ಜನರ ಮೇಲೆ ಪ್ರತ್ಯಕ್ಷವಾದ ಹೊರೆಯಾಗುತ್ತದೆ. ಎತ್ತಿದ ಸಾಲದ ಮೇಲೆ ಸರ್ಕಾರ ನೇರವಾಗಿ ಬಡ್ಡಿ ಹಾಗೂ ಕಂತು ಕೊಡಬೇಕಾಗಿ ಬಂದಾಗ ಇದಕ್ಕಾಗಿ ಸರ್ಕಾರ ಪ್ರಜೆಗಳ ಮೇಲೆ ಹೆಚ್ಚು ತೆರಿಗೆ ಹೇರಬೇಕಾಗಿ ಬರಬಹುದು. ಇದರಿಂದ ಜನರ ಉಳಿತಾಯ ಪ್ರವೃತ್ತಿಯೂ ಬಂಡವಾಳ ಶೇಖರಣೆಯೂ ಕಡಿಮೆಯಾಗಿ ಉತ್ಪಾದನೆ ಕುಂಠಿತಗೊಳ್ಳಬಹುದು.
	
ಆದ್ದರಿಂದ ಖಾಸಗಿ ವಲಯದಲ್ಲೆ ಆಗಲಿ ಸರ್ಕಾರಿ ವಲಯದಲ್ಲೆ ಆಗಲಿ ವಿದೇಶೀ ಬಂಡವಾಳದ ಅಥವಾ ಅಂತರರಾಷ್ಟ್ರೀಯ ಸಂಸ್ಥೆಗಳ ಸಾಲದ ನೆರವು ಪಡೆಯುವಾಗ ಇದರಿಂದ ಋಣಿ ರಾಷ್ಟ್ರಕ್ಕೆ ಅಂತಿಮವಾಗಿ ದೊರಕುವ ಪ್ರಯೋಜನವೆಷ್ಟೆಂಬುದನ್ನು ಕುರಿತು ವಿವೇಚಿಸುವುದು ಅವಶ್ಯವಾಗಿರುತ್ತದೆ.
	
ಪರ ರಾಷ್ಟ್ರಗಳಿಂದ ಪಡೆಯುವ ಋಣದ ತೀರುವೆಗಾಗಿ ಸುವ್ಯವಸ್ಥಿತ ನಿಧಿಯ ರಚನೆಯಾಗದಿದ್ದರೆ, ಈ ಹಣದಿಂದ ಲಾಭದಾಯಕ ನಿಯೋಜನೆಯಾಗದಿದ್ದರೆ ಈ ಸಾಲ ಅಪ್ರಯೋಜಕವಾಗುವುದಲ್ಲದೆ ಇದು ಋಣಿ ರಾಷ್ಟ್ರವನ್ನು ಅನಿರೀಕ್ಷಿತ ಆರ್ಥಿಕ ಮುಗ್ಗಟ್ಟಿಗೆ ಗುರಿಮಾಡುತ್ತದೆ. ಆದಾಗ್ಯೂ ಇಂಥ ಸಾಲಗಳನ್ನು ಅಭಿವೃದ್ಧಿ ಹೊಂದ ಬಯಸುವ, ಹೆಚ್ಚು ಬಂಡವಾಳವಿಲ್ಲದ ರಾಷ್ಟ್ರಗಳು ಪಡೆಯಲೇಬೇಕಾಗುತ್ತದೆ. ಈ ಸಾಲಗಳನ್ನು ಒದಗಿಸುವ ನಿಮಿತ್ತವಾಗಿ ಮತ್ತು ಹಿಂದುಳಿದ ರಾಷ್ಟ್ರಗಳ ಹಿತದೃಷ್ಟಿಯಿಂದ ಆಧುನಿಕ ಪ್ರಪಂಚದ ಆರ್ಥಿಕ ಕ್ಷೇತ್ರದಲ್ಲಿ ಅನೇಕಾನೇಕ ಯೋಜನೆಗಳೂ ಸಾಲಗಳನ್ನು ಒದಗಿಸುವ ಸಂಸ್ಥೆಗಳೂ ಜನಿಸಿವೆ. ಇವುಗಳಿಂದ ಒದಗಬಹುದಾದ ಸಾಲಗಳು ಬಹಳಮಟ್ಟಿಗೆ ನಿಗದಿಯಾದ ಸಾಲಗಳು, ಗೊತ್ತಾದ ಅಭಿವೃದ್ಧಿ ಕಾರ್ಯಗಳಿಗಾಗಿಯೇ ನೀಡಲಾದಂಥವು. ರಾಷ್ಟ್ರದ ಆರ್ಥಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟು ರಾಷ್ಟ್ರದ ಹಿತದೃಷ್ಟಿಯಿಂದ ನೆರವು ಸಾಲ ಪಡೆಯಬೇಕೆಂಬುದು ನಿರ್ವಿವಾದ. 

(ಕೆ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ